ಪ್ರಿಯರೇ,
ಕ್ರಿಸ್‍ಮಸ್ ಹಬ್ಬದ ಇನ್ನೊಂದು ಅರ್ಥ ಬಂಧುತ್ವ ಅಥವಾ ಭ್ರಾತೃತ್ವ. ಯೇಸುಸ್ವಾಮಿಯವರು ಹುಟ್ಟಿದ ಈ ವಿಶ್ವದಲ್ಲಿ ಎಲ್ಲರೂ ಸಹಬಾಳ್ವೆಯನ್ನು ನಡೆಸುವಂತದ್ದು. ಜಾತಿ. ಧರ್ಮ, ಬಣ್ಣ, ಲಿಂಗ, ಅಂತಸ್ತು – ಇವುಗಳ ಸೀಮೆಯನ್ನು ದಾಟಿ ‘ಬಂಧುತ್ವ’ ಎಂಬ ಶೀರ್ಷಿಕೆಯಡಿ ಪ್ರೀತಿ, ಅಹಿಂಸೆ, ಸತ್ಯ ಮತ್ತು ಕರುಣೆಯಿಂದ ಬಾಳುವುದು.
ಪ್ರಪ್ರಥಮವಾಗಿ ನಾವೆಲ್ಲರೂ ಮನುಷ್ಯರು/ದೇವರ ಮಕ್ಕಳು. ನಮ್ಮಲ್ಲಿರುವ ರಕ್ತ, ಜೀವಕಣ ಹಾಗೂ ಉದ್ದೇಶ ಒಂದೇ: ನಾವೆಲ್ಲರೂ ಉತ್ತಮ ಜೀವನವನ್ನು ನಡೆಸಿ ಪರಲೋಕದಲ್ಲಿ ಮೋಕ್ಷಾನಂದವನ್ನು ಪಡೆಯುವುದು. ದೇವರು ನಮ್ಮನ್ನು ಅವರ ಹೋಲಿಕೆಯಲ್ಲಿ ಹಾಗೂ ದೇವಾನುರೂಪದಲ್ಲಿ ಸೃಷ್ಟಿಸಿದರು ಎಂದು ಬೈಬಲ್ ಹೇಳುತ್ತದೆ. ನಾವು ಯಾವುದೇ ಧರ್ಮದವರಿರಲಿ, ‘ಬಂಧುತ್ವ’ ಹಾಗೂ ಮನುಷ್ಯ ಸಮುದಾಯವನ್ನು ಹುಟ್ಟುಹಾಕುವುದು ಮತ್ತು ಎಲ್ಲರೂ ಪರಸ್ಪರ ಸಹಬಾಳ್ವೆಯನ್ನು ನಡೆಸುವಂತಹ ವಾತಾವರಣವನ್ನು ನಿರ್ಮಿಸುವುದು ಅಗತ್ಯ. ಅದಕ್ಕಾಗಿ ನಾವು ಪರರಲ್ಲಿ ದೇವರನ್ನು ಕಾಣಬೇಕು. ದೇವರನ್ನು ನಾವು ಯಾವ ರೀತಿ ಆರಾಧಿಸುತ್ತೇವೋ ಅದೇ ಮಾದರಿಯಲ್ಲಿ ಪರರನ್ನು ನಿರ್ಮಲ ಮನಸ್ಸಿನಿಂದ ಪ್ರೀತಿಸಬೇಕು.
ಇಂದಿನ ಸಮಾಜದಲ್ಲಿ ಹಬ್ಬಗಳ ವಿಜ್ರಂಭಣೆಯ ಆಚರಣೆಯ ಒಟ್ಟಿಗೆ ಮನುಷ್ಯತ್ವದ ಚಟುವಟಿಕೆಗಳನ್ನು ಇನ್ನೂ ಕೂಡಾ ಹೆಚ್ಚಿಸುವುದು ತುಂಬಾ ಅಗತ್ಯವಿದೆ. ಇಂದು ನಾವು ರಾಜಕೀಯ ಹಾಗೂ ಧರ್ಮದ ಶೀರ್ಷಿಕೆಯಡಿ ಮನುಷ್ಯತ್ವವನ್ನು ಕಳೆದುಕೊಂಡಿದ್ದೇವೆ. ಸಮಾಜದಲ್ಲಿ ಏನೂ ನಡೆದರೂ ಆ ವ್ಯಕ್ತಿ ಯಾವ ಧರ್ಮಕ್ಕೆ ಹಾಗೂ ಪಕ್ಷಕ್ಕೆ ಸೇರಿದವ ಎಂದು ಮೊದಲು ಖಚಿತಪಡಿಸಿ ನಂತರ ನಾವು ಕಾರ್ಯಪೃವ್ರತ್ತರಾಗುತ್ತೇವೆ. ಈ ರೀತಿಯ ನಡವಳಿಕೆ ತುಂಬಾ ಖೇದಕರ ಹಾಗೂ ಅಷ್ಟೇ ಹಾನಿಕರ.
ಕ್ರಿಸ್‍ಮಸ್ ಹಬ್ಬ ಮಾನವ ಸಮುದಾಯವನ್ನು ವೃಧ್ಧಿಸಲು ಕರೆನೀಡುತ್ತೇವೆ. ಈ ಪ್ರೀತಿಯ ಹಬ್ಬ ಮೂಲಭೂತವಾಗಿ ಕ್ರೈಸ್ತರ ಹಬ್ಬವಾದರೂ, ಇಂದು ಇದು ಕ್ರೈಸ್ತರಿಗಾಗಿ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಮನುಷ್ಯತ್ವವನ್ನು ಪ್ರತಿಪಾದಿಸುವ ಪ್ರತಿಯೊಬ್ಬರು ಈ ಹಬ್ಬದಲ್ಲಿ ಪಾಲ್ಗೊಂಡು ಸಂತೋಷಪಡುತ್ತಾರೆ. ಇಂದು ವಸ್ತುಭೋಗವಾದವನ್ನು (Consumerism) ಪ್ರತಿಪಾದಿಸುವ ಮಾಧ್ಯಮ ಹಾಗೂ ಜಾಹಿರಾತುವರ್ಗ ಮನುಷ್ಯತ್ವವನ್ನು ವಿನಾಶರೂಪಕ್ಕೆ ತಳ್ಳುತ್ತಿರುವುದು ತುಂಬಾ ಶೋಚನೀಯ ನಡವಳಿಕೆ. ಮನುಷ್ಯತ್ವದ ಸಾಮಾನ್ಯ ಮೌಲ್ಯಗಳನ್ನು ಪ್ರತಿಪಾಲಿಸುವುದರೊಂದಿಗೆ ಕ್ರಿಸ್‍ಮಸ್ ಹಬ್ಬದ ಸಂದೇಶವನ್ನು ನಾವು ದಿನನಿತ್ಯ ಸಾರುತ್ತೇವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ಸಮಾಜದಲ್ಲಿ ಯಾವುದೇ ಸಂಘರ್ಷವಿರಲಿ, ಅದನ್ನು ಸರಿಪಡಿಸುವ ಒಂದೇ ಒಂದು ದಾರಿ – ಸಂವಾದ. ವಿವಿಧ ಧರ್ಮಗಳ ಹಾಗೂ ಸಂಸ್ಕೃತಿಗಳ ನಡುವೆ ಸಂವಾದ ನಡೆಸುವುದರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಲು ಸಾಧ್ಯ. ಕ್ರಿಸ್‍ಮಸ್ ಎಂದರೆ ದೇವರು ತಮ್ಮ ಕುಮಾರ ಯೇಸುಕ್ರಿಸ್ತನ ಮುಖಾಂತರ ಮಾನವಕುಲಕ್ಕೆ ಒಗ್ಗಟ್ಟುವಿನ ಸಂದೇಶವನ್ನು ನೀಡಿದರು. ಆದುದರಿಂದ ಮನುಷ್ಯತ್ವಕ್ಕೆ ಪ್ರಥಮ ಆದ್ಯತೆಯನ್ನು ನೀಡಿ ಮೂಲಭೂತ ಮಾನವ ಸಮುದಾಯವನ್ನು ಕಟ್ಟೋಣ.
ತಮಗೆಲ್ಲರಿಗೂ ಕ್ರಿಸ್‍ಮಸ್ ಹಬ್ಬದ ಹಾಗೂ ಹೊಸ ವರುಷದ ಶುಭಾಶಯಗಳು.