ಇತ್ತೀಚೆಗೆ ಮಂಗಳೂರಿನ ಮೂರು ದೈವಸ್ಥಾನಗಳ ಕಾಣಿಕೆ ಡಬ್ಬಿಯಲ್ಲಿ ಯಾರೋ ಕಿಡಿಗೇಡಿಗಳು ಕ್ಷೇತ್ರದ ಭಕ್ತಾಧಿಗಳ ಅಧ್ಯಾತ್ಮಿಕ ನಂಬಿಕೆಗೆ ಚ್ಯುತಿಯನ್ನುಂಟು ಮಾಡುವ ಹೀನ ಕೃತ್ಯ ಎಸಗಿದ್ದು, ಸಾರ್ವಜನಿಕರ ಗಮನಕ್ಕೆ ಬಂದಿದ್ದು ಕ್ಷೇತ್ರದ ಭಕ್ತಾಧಿಗಳಿಗೆ ಅತೀವ ನೋವಾಗಿದೆ. ಈ ಕೃತ್ಯದ ಬಗ್ಗೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಎಲ್ಲಾ ಕ್ಷೇತ್ರದ ಭಕ್ತಾಧಿಗಳಿಗೆ ತಮ್ಮ ದುಖಃ ಮತ್ತು ಕಳವಳವನ್ನು ವ್ಯಕ್ತಪಡಿಸುತ್ತಾ, ಈ ಕೃತ್ಯ ಅಕ್ಷಮ್ಯ ಅಪರಾಧವಾಗಿದ್ದು ಇದನ್ನು ಖಡಾ ಖಂಡಿತವಾಗಿ ಖಂಡಿಸಿದ್ದಾರೆ.
ಯಾವುದೇ ಧರ್ಮದ ಭಕ್ತಾಧಿಗಳ ನಂಬಿಕೆಗೆ ಚ್ಯುತಿ ಬರುವಂತೆ ಮಾಡುವುದು ಯಾವುದೇ ಕಾರಣಕ್ಕೂ ಸಲ್ಲದು. ಇದು ಅವಿವೇಕಿಗಳ ಮತ್ತು ಹೇಡಿಗಳ ಕೃತ್ಯವಾಗಿದ್ದು, ಆ ವ್ಯಕ್ತಿಗಳ ವಿಕೃತ ಮನಸ್ಸು ಈ ಘಟನೆಯಲ್ಲಿ ಕಂಡುಬರುತ್ತದೆ. ಮತ್ತೊಬ್ಬರ ಧಾರ್ಮಿಕ ನಂಬಿಕೆಗೆ ಮಸಿಬಳಿಯುವ ಇರಾದೆಯಿಂದ ಮತ್ತು ಶಾಂತಿ ಹಾಗೂ ಕೋಮುಸಾಮರಸ್ಯ ಕದಡುವ ಸಮಾಜಿಕ ದ್ರೋಹದ ಕೆಲಸವಾಗಿದ್ದು, ಯಾವುದೇ ವ್ಯಕ್ತಿ ಈ ಕೃತ್ಯ ಎಸಗಿದ್ದರೂ, ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಂಡು, ಕ್ಷೇತ್ರದ ಭಕ್ತಾಧಿಗಳ ನಂಬಿಕೆಗೆ ನ್ಯಾಯ ಒದಗಿಸಿಕೊಡುವಲ್ಲಿ ಜಿಲ್ಲಾಡಳಿತ ಮತ್ತು ಪೋಲಿಸ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಧರ್ಮಾಧ್ಯಕ್ಷರು ಆಗ್ರಹಿಸಿದ್ದಾರೆ.
ಇಂತಹ ಅಹಿತಕರ ಘಟನೆಗಳು ಪುನಾರವರ್ತಿಸದಂತೆ ಮತ್ತು ಇನ್ನೊಬ್ಬರ ಧರ್ಮದ ಹಿಯಾಳಿಸುವಿಕೆ ಇನ್ನು ಮುಂದೆ ಯಾವುದೇ ಕಾರಣಕ್ಕೂ ಅಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲು ಅವರು ವಿನಂತಿಸಿದ್ದಾರೆ. ಹಾಗೆಯೇ ನೊಂದ ಕ್ಷೇತ್ರದ ಎಲ್ಲಾ ಧರ್ಮಬಾಂಧವರಿಗೆ ತಮ್ಮ ಸಾಂತ್ವನದ ಸಂದೇಶವನ್ನು ಈ ಮೂಲಕ ನೀಡಿದ್ದಾರೆ.