March 24, 2017: ಫಾದರ್ ಮುಲ್ಲರ್ ಆಸ್ಪತ್ರೆಯ ನಿರ್ದೇಶಕರಾದ ರೆ| ಫಾ| ಪ್ಯಾಟ್ರಿಕ್ ರೊಡ್ರಿಗಸ್ ಅವರಿಗೆ ಶ್ರದ್ಧಾಂಜಲಿ ನೀಡುವ ಕಾರ್ಯಕ್ರಮವು ಫಾದರ್ ಮುಲ್ಲರ್ ಆಸ್ಪತ್ರೆಯ ಚಾಪೆಲ್ನಲ್ಲಿ ನಡೆಯಿತು. ಮೃತರ ಪಾರ್ಥಿವ ಶರೀರವು ಚಾಪೆಲ್ನಲ್ಲಿ ಇಟ್ಟು ಮಂಗಳೂರಿನ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ರೈ| ರೆ| ಬಿಷಪ್ ಅಲೋಶಿಯಸ್ ಪಾವ್ಲ್ ಡಿ’ಸೋಜ ಅವರ ನೇತೃತ್ವದಲ್ಲಿ ಬಲಿಪೂಜೆಯನ್ನು ನೆರವೇರಿಸಲಾಯಿತು. ಫಾ| ಮುಲ್ಲರ್ಸ್ ಆಸ್ಪತ್ರೆಯ ಸಿಬಂದಿ ವರ್ಗ, ವೈದ್ಯರುಗಳು ಹಾಗೂ ಕಾಲೇಜುಗಳ ಆಡಳಿತ ವರ್ಗ, ವಿದ್ಯಾರ್ಥಿಗಳು ಬಲಿಪೂಜೆಯಲ್ಲಿ ಭಾಗವಹಿಸಿದ್ದರು.
ಮೃತರಿಗೆ ಮೊದಲು ಫಾ| ಮುಲ್ಲರ್ನ ಮಾಜಿ ನಿರ್ದೇಶಕರಾದ ಬ್ಯಾಪ್ಟಿಸ್ಟ್ ಮಿನೇಜಸ್ ಅವರು ಶ್ರದ್ಧಾಂಜಲಿ ನೀಡಿ, ಅವರ ಒಡನಾಟ ಹಾಗೂ ಫಾ| ಪ್ಯಾಟ್ರಿಕ್ ರೊಡ್ರಿಗಸ್ ಅವರ ಸೇವೆ, ಸಂಸ್ಥೆಯನ್ನು ಕಳೆದ 10 ವರ್ಷಗಳಿಂದ ನಡೆಸಿಕೊಂಡು ಬಂದ ರೀತಿ ಶ್ಲಾಘನೀಯವೆಂದರು. ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ| ಸಂಜೀವ ರೈ ಅವರು ಶ್ರದ್ಧಾಂಜಲಿ ನೀಡಿ ಅವರು ಕಳೆದ ಒಂದು ದಶಕದಿಂದ ಫಾ| ಪ್ಯಾಟ್ರಿಕ್ ಅವರ ಆಡಳಿತ ವೈಖರಿ ಸಿಬಂಧಿ ಜತೆ ಅವರ ಒಡನಾಟ ಹಾಗೂ ಆದರ್ಶ ಜೀವನದ ಬಗ್ಗೆ ಕೊಂಡಾಡಿದರು. ಬಿಷಪ್ ಅಲೋಶಿಯಸ್ ಪಾವ್ಲ್ ಡಿ’ಸೋಜ ಅವರು ಮಾತನಾಡಿ ಫಾ| ಪ್ಯಾಟ್ರಿಕ್ ರೊಡ್ರಿಗಸ್ ಕಳೆದ ಹತ್ತು ವರ್ಷಗಳಿಂದ ಫಾ| ಮುಲ್ಲರ್ ಚಾರಿಟೇಬಲ್ ಇನ್ಸ್ಟಿಟ್ಯೂಶನ್ನ್ನು ಎತ್ತರದ ಶಿಖರಕ್ಕೆ ಕೊಂಡೊಯ್ದಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಫಾ| ಮುಲ್ಲರ್ ಕನ್ವೆಷನ್ ಸೆಂಟರಿನ ಉದ್ಘಾಟನೆಯ ಸಮಯದಲ್ಲಿ ಅವರನ್ನು ಅಭಿನಂದಿಸಿದ್ದನ್ನು ನೆನಪಿಸಿಕೊಂಡರು.
ಈ ಕಾರ್ಯಕ್ರಮದಲ್ಲಿ ಫಾ| ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ರೆ| ಫಾ| ರಿಚರ್ಡ್ ಕುವೆಲ್ಲೊ, ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ರೆ| ಫಾ| ರೂಡಾಲ್ಫ್ ರವಿ ಡೇಸಾ, ತುಂಬೆ ಆಸ್ಪತ್ರೆಯ ಆಡಳಿತಾಧಿಕಾರಿ ರೆ| ಫಾ| ರೋಶನ್ ಕ್ರಾಸ್ತಾ, ದೇರಳಕಟ್ಟೆ ಹೊಮಿಯೊಪತಿ ಆಸ್ಪತ್ರೆಯ ಆಡಳಿತಾಧಿಕಾರಿ ರೆ| ಫಾ| ವಿನ್ಸೆಂಟ್ ಸಲ್ಡಾನ್ಹಾ, ಫಾ| ಮುಲ್ಲರ್ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ರೆ| ಫಾ| ಅಜಿತ್ ಮಿನೇಜಸ್ ಮುಂತಾದವರು ಉಪಸ್ಥಿತರಿದ್ದರು.
ರೆ| ಫಾ| ರೋಶನ್ ಕ್ರಾಸ್ತಾ ಕಾರ್ಯಕ್ರಮ ನಿರ್ವಹಿಸಿದರು. ರೆ| ಫಾ| ರಿಚರ್ಡ್ ಕುವೆಲ್ಲೊ ವಂದಿಸಿದರು.
Pics : Stanly Bantwal